Sunday, 31 August 2014

ಬಸರಾಳು

ಬಸರಾಳು


ಮಂಡ್ಯ ತಾಲ್ಲೂಕಿನ ಒಂದು ಹೋಬಳಿ ಮತ್ತು ಅದರ ಕೇಂದ್ರ ಸ್ಥಳ ಮಂಡ್ಯಕ್ಕೆ ಉತ್ತರದಲ್ಲಿ ೨೪ ಕಿ.ಮೀ. ದೂರದಲ್ಲಿರುವ ಈ ಗ್ರಾಮವು ಹೊಯ್ಸಳ ವಾಸ್ತುಶಿಲ್ಪಕ್ಕೆ ಹೆಸರಾದ ಸ್ಥಳ ಹೊಯ್ಸಳರ ಕಾಲದಲ್ಲಿ ಇದು ಬಸುರಿವಾಳ ಎಂಬ ಹೆಸರಿನ ಅಗ್ರಹಾರವಾಗಿತ್ತು. ಇಲ್ಲಿರುವ ಮಲ್ಲಿಕಾರ್ಜುನ ದೇವಾಲಯ ೧೨೩೪ರಲ್ಲಿ ಹೊಯ್ಸಳದೊರೆ ಎರಡನೆಯ ನರಸಿಂಹ ದಂಡನಾಯಕ ಹರಿಹರನಿಂದ ಸ್ಥಾಪಿಸಲ್ಪಟ್ಟಿತು. ಹರಿಹರ ಸೇವುಣರನ್ನು ಸೋಲಿಸಿ ಅದ್ರ ಸ್ಮರಣಾರ್ಥವಾಗಿ ಇದೇ ಗ್ರಾಮಕ್ಕೆ ಸೇರಿದವನಾದ ತನ್ನ ತಂದೆಯ ಹೆಸರಿನಲ್ಲಿ ಈ ದೇವಾಲಯ ಕಟ್ಟಿಸಿದ.

ಮಂಡ್ಯ ಸಕ್ಕರೆ ಕಾರ್ಖಾನೆ

ಮಂಡ್ಯ ಸಕ್ಕರೆ ಕಾರ್ಖಾನೆ



ಮಂಡ್ಯನಗರದಲ್ಲಿರುವ ಮೈಸೂರು ಸಕ್ಕರೆ ಕಾರ್ಖಾನೆ ಏಷ್ಯಾದಲ್ಲಿಯೇ ಅತಿ ದೊಡ್ಡ ಕಾರ್ಖಾನೆ. ಅನೇಕ ಏರಿಳಿತಗಳನ್ನು ಕಂಡು ಇದೀಗ ಚೇತರಿಸಿಕೊಳ್ಳುತ್ತಿದೆ. ಈ ಕಾರ್ಖಾನೆಯ ನಿರ್ಮಾಣಕ್ಕೆ ಕಾರಣರಾದವರು ನಾಲ್ವಡಿಯವರು, ಮಿರ್ಜಾ ಇಸ್ಮಾಯಿಲ್ ಹಾಗೂ ಕೆನಾಡಾದ ವೆಸ್ಲಿ .ಸಿ ಕೋಲ್ಮನ್ ಎಂಬ ವ್ಯವಸಾಯ ತಜ್ಞ. ಮಂಡ್ಯ ಜಿಲ್ಲೆಯ ಜೀವನಾಡಿ, ಆರ್ಥಿಕ ಸಂಪನ್ಮೂಲದ ಕಣಜ ಎಂದೇ ಖ್ಯಾತಿ ಪಡೆದಿದ್ದ ನಮ್ಮ ಈ ಕಾರ್ಖಾನೆ ಸ್ವಲ್ಪಸೊರಗಿ, ಇದೀಗ ಚೇತರಿಕೊಳ್ಳುತ್ತಿದೆ

ಕುಂತಿಬೆಟ್ಟ

ಕುಂತಿಬೆಟ್ಟ




ಪಾಂಡವಪುರಕ್ಕೆ ಹಿಂದೆ ಹಿರೋಡೆ ಎಂದು ಹೆಸರಿತ್ತು. ಪಾಂಡವರು ತಮ್ಮ ವನವಾಸದ ಕಾಲದಲ್ಲಿ ಇಲ್ಲಿ ನೆಲೆಸಿದ್ದರು ಎಂಬ ಹಿನ್ನೆಲೆಯಲ್ಲಿ ಈ ಬೆಟ್ಟಕ್ಕೆ ಕುಂತಿಬೆಟ್ಟ ಎಂಬ ಹೆಸರು ಬಂದಿದೆ. ಇಲ್ಲಿ ಭೀಮನು ಬಕಾಸುರನನ್ನು ವಧೆ ಮಾಡಿದನೆಂದು ನಂಬಿಕೆ ಇದೆ. ಎರಡು ಬೆಟ್ಟಗಳು ಬೇರ್ಪಟ್ಟು ಒಂದು ಬೆಟ್ಟದಲ್ಲಿ ಕುಂತಿಕೊಳ ಇದ್ದರೆ ಮತ್ತೊಂದು ಬೆಟ್ಟದಲ್ಲಿ ಕುಂತಿ ಒನಕೆಯನ್ನು ಕಾಣಬಹುದು. ಈ ಬೆಟ್ಟದ ತಪ್ಪಲಲ್ಲಿ ಹೈದರ್ ಮತ್ತು ಟಿಪ್ಪುಕಾಲದಲ್ಲಿ ಪ್ರೆಂಚ್ ಸೈನ್ಯ ಬೀಡು ಬಿಟ್ಟಿದ್ದ ಕಾರಣ ಪ್ರೆಂಚ್‌ರಾಕ್ಸ್‌ಎಂದೂ ಹೆಸರಾಗಿತ್ತು.



ಕೆರೆತೊಣ್ಣೊರು

ಕೆರೆತೊಣ್ಣೊರು


ಮೇಲುಕೋಟೆ ಬೆಟ್ಟಕ್ಕೆ ಹೊಂದಿಕೊಂಡಂತಿರುವ ಕೆರೆತೊಣ್ಣೊರು ಹೊಯ್ಸಳರ ಕಾಲದಲ್ಲಿ ಬೇಸಿಗೆಯ ತಂಗುದಾಣವಾಗಿತ್ತು. ಈಗ ಇದು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಂಡಿದೆ. ಇಲ್ಲಿನ ನಂಬಿನಾರಾಯಣ, ಶ್ರೀವೇಣುಗೋಪಾಲ ದೇವಾಲಯಗಳು ಪ್ರಸಿದ್ದವಾಗಿದೆ. ಸಾವಿರ ಜೈನಯತಿಗಳನ್ನು ವಾದದಲ್ಲಿ ರಾಮಾನುಜರು ಸೋಲಿಸಿದ್ದು ಇದೇ ಜಾಗದಲ್ಲಿ ಎಂದು ಪುರಾವೆಗಳು ಹೇಳುತ್ತವೆ. ರಾಮಾನುಜರೇ ನಿರ್ಮಿಸಿದ ತಿರುಮಲಸಾಗರ ಎರಡು ಬೆಟ್ಟಗಳಿಗೆ ಹೊಂದಿಕೊಂಡಂತೆ ಇದೆ. ಕೆರೆತೊಣ್ಣೊರಿನ ಮದಗ ಎಂಬ ಜಲಪಾತದಲ್ಲಿ ಸ್ನಾನಮಾಡಿದರೆ ಚರ್ಮವ್ಯಾಧಿಗಳು ಪರಿಹಾರವಾಗುತ್ತದೆ ಎಂಬ ಪ್ರತೀತಿ ಇದೆ. ಇಲ್ಲಿಗೆ ಸಮೀಪದ ಸುಂಕಾತೊಣ್ಣೂರಿನಲ್ಲಿ ಕರಿಭಂಟನ ಕಾಳಗಕ್ಕೆ ಸಂಬಂಧಪಟ್ಟಂತೆ ಹಲವಾರು ಐತಿಹ್ಯ ದೊರೆಯುತ್ತವೆ.


ಮೇಲುಕೋಟೆ

ಮೇಲುಕೋಟೆ


ಮೇಲುಕೋಟೆ ಪ್ರಸಿದ್ದ ಯಾತ್ರ ಸ್ಥಳ. ದ್ವಾಪರಯುಗದಲ್ಲಿ ಕೃಷ್ಣ ಮತ್ತು ಯಾದವರು ನಾರಾಯಣನನ್ನು ಪೂಜಿಸಿದ್ದರಿಂದ ಮುಂದೆ ಅಂದರೆ ೯೦೦ ವರ್ಷಗಳ ಹಿಂದೆ ಯತಿಗಳಾದ ರಾಮಾನುಜಚಾರ್ಯರು ಇಲ್ಲಿಗೆ ಆಗಮಿಸಿ ದೇವಾಲಯ, ಕಲ್ಯಾಣಿ, ಕೆರೆ ಕಟ್ಟೆಗಳನ್ನೊಳಗೊಂಡಂತೆ ಸಮಸ್ತ ಮೇಲುಕೋಟೆಯನ್ನು ಜೀರ್ಣೋದ್ಧಾರ ಮಾಡಿದ್ದರಿಂದ ಯದು-ಶೈಲ ಎಂದು ಹೆಸರಾಯಿತು. ಇಲ್ಲಿನ ಆರಾಧ್ಯ ದೈವ ಚೆಲುವನಾರಾಯಣ ಮೇಲುಕೋಟೆ ಗ್ರಾಮದಲ್ಲಿದ್ದರೆ, ಯೋಗಾನರಸಿಂಹಸ್ವಾಮಿ ಬೆಟ್ಟದ ಮೇಲಿದೆ. ಪಂಚಕಲ್ಯಾಣಿ, ಧನುಷ್ಕೋಟಿ, ದಳವಾಯಿಕೆರೆ ಮುಂತಾದ ಪ್ರಾಚೀನ ಕೆರೆ, ಕಟ್ಟೆ, ಕಲ್ಯಾಣಿಗಳನ್ನು ಕಾಣಬಹುದಲ್ಲದೆ ವಿಜಯನಗರ ಕಾಲದ ಗೋಪಾಲರಾಯನ ಹೆಬ್ಬಾಗಿಲು ರಾಜ್ಯ ಸರ್ಕಾರದ ಸಂಸ್ಕೃತ ಪಾಠಶಾಲೆ, ಕೇಂದ್ರರಾಜ್ಯ ಸರ್ಕಾರಗಳ ಸಂಸ್ಕೃತ ಅಕಾಡೆಮಿಗಳಲ್ಲಿ ಪ್ರಾಚೀನ ತಾಳೆಗರಿಗಳ ಸಂಗ್ರಹವನ್ನು ಕಾಣಬಹುದು.

ವೈರಮುಡಿ

ಪಾಂಡವಪುರ ತಾಲ್ಲೂಕಿನ ಮೇಲುಕೋಟೆ ಕ್ಷೇತ್ರದಲ್ಲಿರುವ ಶ್ರೀ ಚಲುವನಾರಾಯಣಸ್ವಾಮಿಗೆ ಪ್ರತಿವರ್ಷ ಮಾರ್ಚಿ ತಿಂಗಳಲ್ಲಿ ಪಡೆಯುವ ಉತ್ಸವವೇ ವೈರಮುಡಿ ರಾಜರ ಕಾಲದಲ್ಲಿ ನೀಡಲಾಗಿರುವ ವಜ್ರಖಚಿತವಾದ ಕಿರೀಟಧಾರಣೆ ಮಾಡಿ ಪುರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಈ ವೈರಮುಡಿ ಉತ್ಸವವನ್ನು ನೋಡಲು ದೇಶ ವಿದೇಶಗಳಿಂದ ಸಹಸ್ರಾರು ಭಕ್ತರು ಆಗಮಿಸುವರು.


Saturday, 30 August 2014

ಮಂಡ್ಯ

ಮಂಡ್ಯ


ಮಂಡ್ಯ ಎಂದರೆ ಇಂಡಿಯಾ” ಎನ್ನುವ ಮಾತೊಂದಿದೆ. ಇಂಡಿಯಾದ ಅನೇಕ ವೈಶಿಷ್ಯಗಳು, ವೈವಿಧ್ಯಗಳು ಮಂಡ್ಯದಲ್ಲಿವೆ. ಹೇಳಿ ಕೇಳಿ ಇದು ಬಯಲು ಸೀಮೆ. ೧೯೩೯ಕ್ಕೆ ಮುಂಚೆ ಮಂಡ್ಯ ಮೈಸೂರು ಜಿಲ್ಲೆಗೆ ಸೇರಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೃಪೆಯಿಂದ ಮಂಡ್ಯ ಪ್ರತ್ಯೇಕ ಅಸ್ತಿತ್ವಕ್ಕೆ ಬಂತು. ಅದಕ್ಕಾಗಿ ನಾಲ್ವಡಿಯವರಿಗೆ ನಮಿಸೋಣ.

ನಾಲ್ವಡಿಯವರು ಮಂಡ್ಯವನ್ನು ಪ್ರತ್ಯೇಕ ಜಿಲ್ಲೆ ಮಾಡುವುದಕ್ಕೆ ಮುಂಚೆಯೇ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕನ್ನಂಬಾಡಿ ಎಂಬಲ್ಲಿ ಕೃಷ್ಣರಾಜ ಜಲಾಶಯ ನಿರ್ಮಿಸಿದರು. ಮಂಡ್ಯಕ್ಕೆ ನೀರುಣಿಸಿದರು. ಮೈಸೂರು ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಕಾರಣರಾದರು. ಸರ್.ಎಂ. ವಿಶ್ವೇಶ್ವರಯ್ಯನವರು ಎಂಜಿನಿಯರ್ ಆಗಿ, ದಿವಾನರಾಗಿ ಮೈಸೂರಿನ ನವಶಿಲ್ಪಿಯಾಗಿ ಕಂಗೊಳಿಸಿದರು. ಮಿರ್ಜಾಇಸ್ಮಾಯಿಲ್ ಅವರು ಜಿಲ್ಲೆಯನ್ನು ಸುಂದರಗೊಳಿಸಲು ನೆರವಾದರು. ಡಾ.ವೆಸ್ಲಿ ಸಿ.ಕೋರ್ಲ್ಮ ಜಿಲ್ಲೆಯ ಕಬ್ಬು ಬೆಳೆ-ಸಕ್ಕರೆ ಕಾರ್ಖಾನೆಯ ಅಭಿವೃದ್ಧಿಗೆ ಕಾರಣರಾದರು.

ಮಂಡ್ಯಜಿಲ್ಲೆ ಕರ್ನಾಟಕ ರಾಜ್ಯದ ದಕ್ಷಿಣ ಭಾಗದಲ್ಲಿದೆ. ಉತ್ತರದಲ್ಲಿ ತುಮಕೂರು ದಕ್ಷಿಣ ಹಾಗೂ ನೈರುತ್ವದಲ್ಲಿ ಮೈಸೂರು, ಪೂರ್ವಕ್ಕೆ ರಾಮನಗರ, ವಾಯುವ್ಯಕ್ಕೆ ಹಾಸನ ಜಿಲ್ಲೆಗಳ ಗಡಿಗಳಿಂದ ಸುತ್ತುವರೆದಿದೆ. ಈ ಜಿಲ್ಲೆಯ ಒಟ್ಟು ವಿಸ್ತೀರ್ಣ ೪೯೫೮ ಚದರ ಕಿ.ಮೀ.ಗಳು ಅಂದರೆ ೧೯೨೪ ಚದರ ಮೈಲಿ. ಸಮುದ್ರಮಟ್ಟಕ್ಕಿಂತ ಸುಮಾರು ೭೬೨ರಿಂದ ೯೧೪ಮೀಟರ್ ಎತ್ತರಕ್ಕಿದೆ. ಮಂಡ್ಯಜಿಲ್ಲೆಯಲ್ಲಿ ಏಳು ತಾಲ್ಲೂಕುಗಳಿವೆ. ಅವು ಮಂಡ್ಯ, ಮದ್ದೂರು, ಮಳವಳ್ಳಿ, ಕೃಷ್ಣರಾಜಪೇಟೆ, ನಾಗಮಂಗಲ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲ್ಲೂಕುಗಳು ಸುಮಾರು ಒಂದೂವರೆ ಸಾವಿರ ಹಳ್ಳಿಗಳಿದ್ದು ಪ್ರಮುಖ ಕಸುಬು ಬೇಸಾಯ

ಪೌರಾಣಿಕ ಹಿನ್ನಲೆ :

ಈ ಪ್ರದೇಶ ದಂಡಕಾರಣ್ಯ, ಮೃಗಪಕ್ಷಿಗಳ ಆಶ್ರಯಧಾಮ, ಮಾಂಡವ್ಯ, ಕದಂಬ, ಅಗಸ್ತ್ಯ, ಗೌತಮ, ಭೃಗು, ಕಣ್ವ, ಲಂಬಕರ್ಣರ ತಪೋಭೂಮಿ, ಪವಿತ್ರತೀರ್ಥ ಕ್ಷೇತ್ರಗಳು, ಕಾವೇರಿ, ಹೇಮಾವತಿ, ಲೋಕಪಾವನಿ, ವೀರವೈಷ್ಣವಿ ಹಾಗೂ ಶಿಂಷಾ ಎಂಬ ಐದು ನದಿಗಳು.
ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಮಂಡ್ಯಜಿಲ್ಲೆಗೆ ಸಂಬಂಧಿಸಿದಂತೆ ಒಂದು ಸಾವಿರಕ್ಕೂ ಹೆಚ್ಚು ಶಾಸನಗಳು ಲಭ್ಯವಾಗಿವೆ. ಗಗನಚುಕ್ಕಿ-ಭರಚುಕ್ಕಿ ಜಲಪಾತಗಳು ಇಲ್ಲಿವೆ. ಕೊಕ್ಕರೆಬೆಳ್ಳೂರು, ರಂಗನತಿಟ್ಟು, ಆದಿಚುಂಚನಗಿರಿ ನವಿಲು ಮುಂತಾದ ಪಕ್ಷಿಧಾಮಗಳು ಪ್ರವಾಸಿಗಳನ್ನು ಆಕರ್ಷಿಸುತ್ತಿವೆ. ವೀರಗಲ್ಲು-ಮಾಸ್ತಿಕಲ್ಲುಗಳ ಸಂಖ್ಯೆ ಗಣನೀಯವಾಗಿದೆ.