Thursday, 7 September 2017

ಕರ್ನಾಟಕ-ಪ್ರವಾಸಿಗರ ಸ್ವರ್ಗ

ಕರ್ನಾಟಕವನ್ನು ಪ್ರವಾಸಿಗರ ಸ್ವರ್ಗವಾಗಿಸಲು ಪ್ರಕೃತಿ ಮತ್ತು ಮನುಷ್ಯ ಪ್ರಯತ್ನಗಳೆರಡೂ ಜೊತೆಗೂಡಿವೆ. ಆದರ ನಿಡಿದಾದ ಸಮುದ್ರತೀರವು ಸಮತಟ್ಟಾದ ಕಿನಾರೆಗಳಿಂದ ಕೂಡಿದೆ. ಎತ್ತರವಾದ ಪಶ್ಚಿಮ ಘಟ್ಟಗಳು/ ನಿತ್ಯಹರಿದ್ವರ್ಣದ ಕಾಡು ಹಾಗೂ ಪ್ರಾಣಿ ಸಂಪತ್ತನ್ನುಹೊಂದಿರುವುದಲ್ಲದೆ ಅನೇಕ ನದಿಗಳು ಅಲ್ಲಿ ಹುಟ್ಟಿ ಪೂರ್ವ ಮತ್ತು
ಪಶ್ಚಿಮದ ಕಡೆ ಹರಿದು ನೆಲದ ಫಲವತ್ತನ್ನು ಹೆಚ್ಚಿಸಿ ಕೃಷಿ ಉತ್ಪನ್ನದ ಅಭಿವೃದ್ಧಿಗೆ ಕಾರಣವಾಗಿವೆ.

ಈ ನದಿಗಳು ನೋಡುಗರ ಕಣ್ಣಿಗೆ ಹಬ್ಬವನ್ನುಂಟುಮಾಡುವ ಅನೇಕ ಜಲಪಾತಗಳನ್ನು ಉಂಟುಮಾಡಿವೆ. ಸಮತಟ್ಟಾದ ಬಯಲು ಪ್ರದೇಶ ಸುಂದರವಾದ ನದಿದಂಡೆಗಳಿಂದ ಕೂಡಿದ್ದುಹೆಸರುವಾಸಿಯಾಗಿವೆ. ಕಲ್ಲುಗುಡ್ಡಗಳು ಸಹಜ ಸುಂದರ ಕಲ್ಲಿನ ವನದಂತೆ ಕಂಗೊಳಿಸುತ್ತವೆ. ಘಟ್ಟ ಪ್ರದೇಶವು ವಿವಿಧ ಪ್ರಾಣಿಗಳಿಗೆ ಆಶ್ರಯತಾಣವಾಗಿದೆ.

ಈ ನಾಡಿನ ಶಿಲಾಯುಗ ಸಂಸ್ಕೃತಿಯನ್ನು  ಬಿಂಬಿಸುವ ಅಸಂಖ್ಯಾತ ನೆಲೆಗಳು  ರಾಜ್ಯದುದ್ದಗಲಕ್ಕೂ  ಕಾಣಸಿಗುತ್ತವೆ.  ಈ  ನಾಡನ್ನಾಳಿದ ಶಾತವಾಹನರು, ಕದಂಬರು, ಬಾದಾಮಿ ಚಾಲುಕ್ಯರು, ಗಂಗರು, ರಾಷ್ಟ್ರಕೂಟರು, ಕಲ್ಯಾಣದ ಚಾಳುಕ್ಯರು, ಹೊಯ್ಸಳರು, ವಿಜಯನಗರ ಅರಸರು,  ಗುಲಬರ್ಗಾ  ಮತ್ತು ಬೀದರಿನ ಬಹಮನಿಯರು, ವಿಜಾಪುರದ ಆದಿಲ್‍ಷಾಹಿಗಳು, ಬೀದರಿನ
ಬರೀದ್‍ಷಾಹಿಗಳು, ಮೈಸೂರಿನ ಒಡೆಯರು, ಕೆಳದಿ ಅರಸರು, ಚಿತ್ರದುರ್ಗ, ಮಾಗಡಿ, ಸುರಪುರ ಮೊದಲಾದ ಪಾಳೆಯಗಾರರ ಬೆರಗುಮೂಡಿಸುವ ಕೋಟೆಕೊತ್ತಲಗಳು, ಕುಸುರಿಕೆಲಸಗಳಿಂದ ಕೂಡಿದ ವಾಸ್ತುಶಿಲ್ಪಗಳು, ಭವ್ಯ ಮಸೀದಿಗಳು ಹಾಗೂ ಹಿಂದೂ-ಮುಸ್ಲಿಂ ಶೈಲಿಯ ಸ್ಮಾರಕÀಗಳನ್ನು ನಿರ್ಮಿಸಿದ್ದಾರೆ. ಪೋರ್ಚುಗೀಸ್ ಮತ್ತು ಇಂಗ್ಲೀಷರ ಆಗಮನ, ಯೂರೋಪಿನ ಪುನರುತ್ಥಾನ ವಾಸ್ತುಶಿಲ್ಪವನ್ನು ಪರಿಚಯಿಸುವುದರ ಜೊತೆಗೆ ಆಕರ್ಷಕ ಚರ್ಚ್‍ಗಳು ಮತ್ತು ಮನ ಸೆಳೆಯುವ ಕಟ್ಟಡಗಳ ನಿರ್ಮಾಣಕ್ಕೆ ಕಾರಣವಾಯಿತು.


ರಾಷ್ಟ್ರೀಯ ಉದ್ಯಾನ, ಹಾಗೂ ಪ್ರಾಣಿ-ಪಕ್ಷಿಧಾಮಗಳಲ್ಲಿ ಪ್ರೇಕ್ಷಕರಿಗೆ ಆನೆ, ಹುಲಿ, ಕಾಡುಕೋಣ, ಜಿಂಕೆ, ಹಂಸ, ನವಿಲು ಮೊದಲಾದ ಕಾಡುಪ್ರಾಣಿಗಳು ಸಹಜರೀತಿಯಲ್ಲಿ ನೋಡಲು ಸಿಗುತ್ತವೆ. ಈ ರಾಷ್ಟ್ರೀಯ ಉದ್ಯಾನಗಳು ಸಂದರ್ಶಕರಿಗೆ ಎತ್ತರವಾದ ಮರ, ಪೊದೆ, ಬಳ್ಳಿಗಳೇ ಮೊದಲಾದ ಸಮೃದ್ಧ ಸಸ್ಯಸಂಪತ್ತನ್ನು ಆದರಪೂರ್ವಕವಾಗಿ ಪರಿಚಯಿಸುತ್ತವೆ. ಕರ್ನಾಟಕವು ಶ್ರೀಗಂಧದ ಸುಗಂಧಯುಕ್ತ ವೃಕ್ಷಗಳಿಗೆ, ವಿಶಾಲವಾದ ತಣ್ಣೆಳಲನ್ನು ನೀಡುವ ಅರಳಿ, ಆಲ, ಅಶ್ವತ್ಥ ಮೊದಲಾದ ಮರಗಳಿಗೆ ಪ್ರಸಿದ್ಧವಾಗಿದೆ.


ಆಧ್ಯಾತ್ಮಿಕ ಆಸಕ್ತಿ ಇರುವವರಿಗೆ ಸ್ಪೂರ್ತಿ ಪಡೆಯಲು ಅವಶ್ಯವಾದ ಮನಃಶಾಂತಿ ನೀಡುವಂತಹ
ಹಿಂದೂ ಹಾಗೂ ಮುಸ್ಲಿಂ ಸಂತರು ಇಲ್ಲಿರುವರು. ಹಾಗೆಯೇ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ ಅಥವಾ
ವೀರಶೈವ ಧಾರ್ಮಿಕ ಗುರುಗಳ ಸಮಾಧಿಗಳಿವೆ. ಯಾತ್ರಿಕರಿಗೆ ಆಧ್ಯಾತ್ಮಿಕ ಪರಿಸರವನ್ನು ಈ ಸಮಾಧಿ-
ಮಂದಿರಗಳು ಸೃಷ್ಟಿಸಿದ್ದು ಅವಶ್ಯಕವಾದ ಮನಃಶಾಂತಿಯನ್ನು ನೀಡುತ್ತವೆ.